ಬೆಂಗಳೂರು : ಜನತೆಯಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಜಾಥಾಗಳಿಗೆ ಎಲ್ಲಾ ಶಾಸಕರ ಪ್ರೋತ್ಸಾಹ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ತಿಳಿಸಿದರು. ಅವರು ಬುಧವಾರ ಬೆಂಗಳೂರಿನಲ್ಲಿ ವಿಶ್ವಕ್ಯಾನ್ಸರ್ ದಿನದ ಅಂಗವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾದ ಕ್ಯಾನ್ಸರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷವೂ ವಿಶ್ವ ಕ್ಯಾನ್ಸರ್ ದಿನ ಅಚರಣೆ ಮಾಡಲಾಗುತ್ತದೆ.
ಕ್ಯಾನ್ಸರ್ ನಿರ್ಮೂಲನೆಗಾಗಿ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಜಾಥಾಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸಬೇಕೆಂದರು.
ಸಾಮಾನ್ಯ ಮಾದರಿ ರಕ್ತ ಪರೀಕ್ಷೆಯಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ಅಂಶ ಸೇರಿಸುವ ಮೂಲಕ ಪ್ಯಾಕೇಜ್ ರೀತಿ ಪರೀಕ್ಷೆ ಮಾಡಿದರೆ ಅನುಕೂಲವಾಗಲಿದೆ. ಎಲ್ಲಾ ರೋಗಗಳಿಗೂ ರಕ್ತ ಪರೀಕ್ಷೆ ಮಾಡುತ್ತಾರೆ. ಅದರಲ್ಲಿ ಕ್ಯಾನ್ಸರ್ ಅಂಶ ಪತ್ತೆ ಮಾಡುವ ಅಂಶ ಸೇರಿಸಿದರೆ ಮೂಲದಲ್ಲಿಯೇ ಕ್ಯಾನ್ಸರ್ ಪತ್ತೆಮಾಡಲು ಸಾಧ್ಯ. ಹಾಗೂ ಶೀಘ್ರದಲ್ಲೂ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಉತ್ತಮ ಆಹಾರ, ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಜನರು ಪ್ರತಿ ವರ್ಷವೂ ಸ್ವಯಂ ಪ್ರೇರಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು. ಜನರಿಗೆ ಸದಾಕಾಲ ಕ್ಯಾನ್ಸರ್ ಜಾಗೃತಿ ಮೂಡಿಸುವ ಆಸ್ಪತ್ರೆ ಕಿದ್ವಾಯಿ. ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆಯಾಗಿರುವ ಕಿದ್ವಾಯಿ ಆಸ್ಪತ್ರೆ ಬಡ ರೋಗಿಗಳ ಆಶಾಕಿರಣವಾಗಿದೆ. ಬೀದರ ಹುಬ್ಬಳ್ಳಿ, ಮೈಸೂರು, ತುಮಕೂರು ಸೇರಿದಂತೆ ಫೆರಿಫೆರಲ್ ಕ್ಯಾನ್ಸರ್ ಘಟಕಗಳನ್ನು ನಿರ್ಮಿಸುವ ಮೂಲಕ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಕಿದ್ವಾಯಿ ಆಸ್ಪತ್ರೆಯ ವೈದ್ಯರು ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.