ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಕ್ಯಾನ್ಸರ್ ತಪಾಸಣಾ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ. ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ರೋಗಿಗಳ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ. ಕ್ಯಾನ್ಸರ್ ಬಗ್ಗೆ ಯಾವುದೇ ಭಯ ಬೇಡ. ಆರಂಭಿಕ ಹಂತದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವ ಮೂಲಕ ಕ್ಯಾನ್ಸರ್ ರೋಗದಿಂದ ಮುಕ್ತವಾಗಬಹುದು.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡಿದರೆ ರೋಗಿಯು ಶೀಘ್ರ ಗುಣಮುಖವಾಗಬಹುದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕರಾದ ಡಾ.ಟಿ.ನವೀನ್ ತಿಳಿಸಿದ್ದಾರೆ.
ಕನ್ನಡ ಚಲನಚಿತ್ರ ನಟ ರಮೇಶ್ ಭಟ್ ಮಾತನಾಡಿ, ಸಾಮಾನ್ಯ ಜನರಿಗೆ ಶ್ರೀಮಂತ ಕಾಯಿಲೆ ಕ್ಯಾನ್ಸರ್. ಈ ಕಾಯಿಲೆ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಕಿದ್ವಾಯಿ ಕಾರ್ಪೊರೇಟ್ ಆಸ್ಪತ್ರೆಗೂ ಮೀರಿ ಬೆಳೆದಿರುವ ಸರಕಾರಿ ಆಸ್ಪತ್ರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಕಿದ್ವಾಯಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಗಳಿಗೆ ಶ್ಲಾಘನೀಯ ಎಂದರು.ಜಾಥಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು. ಶುಶ್ರೂಷ ಪರಿಷತ್ತಿನ ಕುಲಸಚಿವ ಕೆ.ಮಲ್ಲು, ಸಂಸ್ಥೆಯ ವೈದ್ಯರಾದ ಡಾ.ಸುರೇಶ್ ಬಾಬು, ಡಾ.ಮಹಾಂತೇಶ್, ಡಾ.ವಿಜಯ್, ಡಾ.ಅರುಣ್ ಕುಮಾರ್ ಸೇರಿದಂತೆ ಜಾಥಾದಲ್ಲಿ ಮತ್ತಿರರರು ಭಾಗವಹಿಸಿದ್ದರು.