ಎನ್.ಸಿ.ಸಿ. ಕೆಡೆಟ್‍ಗಳು ದೇಶದ ಭವಿಷ್ಯದ ಆಸ್ತಿ -

varthajala
0

 ಎನ್.ಸಿ.ಸಿ. ಕೆಡೆಟ್‍ಗಳು ದೇಶದ ಭವಿಷ್ಯದ ಆಸ್ತಿ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.ಜನವರಿ 26 ರಂದು ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯದ ಎನ್.ಸಿ.ಸಿ. ಕೆಡೆಟ್‍ಗಳು ಭಾಗವಹಿಸಿ ಸತತವಾಗಿ ಎರಡನೇ ಬಾರಿಗೆ ಬೆಳ್ಳಿ ಪದಕ ಪಡೆದಿದ್ದಾರೆ. ಎನ್.ಸಿ.ಸಿ. ಕೆಡೆಟ್‍ಗಳು ತೋರುತ್ತಿರುವ ಅದ್ಭುತ ಸಾಧನೆ ಮತ್ತು ಶಿಸ್ತು ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಎನ್.ಸಿ.ಸಿ. ಕೆಡೆಟ್ ಗಳ ಶಿಸ್ತು, ಸಮನ್ವಯತೆ, ಸಂಗೀತ ಮತ್ತು ವಾದ್ಯಗೋಷ್ಠಿಯ ಪ್ರದರ್ಶನವು ಅತ್ಯಂತ ಉನ್ನತ ಮಟ್ಟದ್ದಾಗಿತ್ತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಕಳೆದ ಎರಡು ವರ್ಷಗಳಿಂದ ಎನ್.ಸಿ.ಸಿ ಚಟುವಟಿಕೆಗಳಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ.

ಮೊದಲ ವರ್ಷ ರನ್ನರ್ ಅಪ್ ಸ್ಥಾನ ಪಡೆದಿದ್ದು, ನಂತರದ ವರ್ಷಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ವರ್ಷವೂ ಸಹ ಕೆಡೆಟ್‍ಗಳು ಹೆಚ್ಚಿನ ಶ್ರಮವಹಿಸಿ ಮತ್ತೊಮ್ಮೆ ಇತಿಹಾಸ ಮರುಕಳಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.ಸಮಾಜದಲ್ಲಿ ಸಶಸ್ತ್ರ ಪಡೆಗಳ ಸಮವಸ್ತ್ರಕ್ಕೆ ಗೌರವ ಮತ್ತು ಆಕರ್ಷಣೆ ಹೆಚ್ಚಿದೆ. ಎನ್.ಸಿ.ಸಿ. ಕೆಡೆಟ್‍ಗಳಿಗೆ ಸಶಸ್ತ್ರ ಪಡೆಗಳ ಶಿಬಿರಗಳಲ್ಲಿ ಭಾಗವಹಿಸುವ ಮತ್ತು ಅಲ್ಲಿನ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡುವ ಅಪರೂಪದ ಅವಕಾಶ ಸಿಗುತ್ತಿದೆ. ಇದು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳನ್ನು ಸೇರಿ ದೇಶ ಸೇವೆ ಮಾಡಲು ಪ್ರೇರಕ ಶಕ್ತಿಯಾಗಲಿದೆ.

ಸರ್ಕಾರದ ಬೆಂಬಲ ಮತ್ತು ಅನುದಾನ :ರಾಜ್ಯದಲ್ಲಿ ಎನ್.ಸಿ.ಸಿ ಬಲವರ್ಧನೆಗೆ ಸರ್ಕಾರ ಸದಾ ಬದ್ಧವಾಗಿದೆ. ಪ್ರಸ್ತುತ ಇರುವ ಕೆಡೆಟ್‍ಗಳ ಸಂಖ್ಯೆಗೆ ಹೆಚ್ಚುವರಿಯಾಗಿ 16,000 ಕೆಡೆಟ್‍ಗಳನ್ನು ಸೇರಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ಎನ್.ಸಿ.ಸಿ ಘಟಕಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಕುರಿತು ಬಜೆಟ್ ಪೂರ್ವ ಚರ್ಚೆಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಸಚಿವರು ಭರವಸೆ ನೀಡಿದರು.

ಶಿಸ್ತು ಮತ್ತು ಸಾಹಸ ಮನೋಭಾವ: ಯುವ ಪೀಳಿಗೆಯಲ್ಲಿ ಸಾಹಸ ಮನೋಭಾವ, ರಾಷ್ಟ್ರೀಯತೆ ಮತ್ತು ಸಮಾಜಕ್ಕೆ ಮಾದರಿಯಾಗುವ ಗುಣಗಳನ್ನು ಬೆಳೆಸುವಲ್ಲಿ ಎನ್.ಸಿ.ಸಿ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಶಕ್ತಿಯಲ್ಲಿ ಅಪಾರವಾದ ಪ್ರತಿಭೆಯಿದ್ದು, ಎನ್.ಸಿ.ಸಿ ಅಂತಹ ವೇದಿಕೆಗಳು ಈ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಿವೆ. ಯಶಸ್ವಿ ಕೆಡೆಟ್‍ಗಳು ಮತ್ತು ಅಧಿಕಾರಿಗಳ ಶ್ರಮವನ್ನು ಸಚಿವರು ಈ ಸಂದರ್ಭದಲ್ಲಿ ಅಭಿನಂದಿಸಿದರು.ಸಮಾರಂಭದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ಜಿ.ಜಗದೀಶ್,  ಕರ್ನಾಟಕ ಮತ್ತು ಗೋವಾ ಡೆಪ್ಯುಟಿ ಡೈರೆಕ್ಟರ್ ಜನರಲ್ ವಿಂಗ್ ಕಮಾಂಡರ್ ಎಸ್.ಬಿ.ಅರುಣ್‍ಕುಮಾರ್, ಎನ್.ಸಿ.ಸಿ ಗ್ರೂಪ್ ಕಮಾಂಡರ್ ಎಸ್.ಎಸ್.ಕಾಳಿಯಾ, ಪಿ.ಆರ್.ಪೊನ್ನಪ್ಪ ಸೇರಿದಂತೆ ಎನ್.ಸಿ.ಸಿ ಯ ಹಿರಿಯ ಅಧಿಕಾರಿಗಳು, ಎನ್.ಸಿ.ಸಿ ಕೆಡೆಟ್‍ಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)