ಎನ್‍ಸಿಸಿ ಕೆಡೆಟ್‍ಗಳು ಶಿಸ್ತು ಮತ್ತು ರಾಷ್ಟ್ರಪ್ರೇಮದ ಪ್ರತೀಕ - ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

varthajala
0

 ಬೆಂಗಳೂರು : ಎನ್‍ಸಿಸಿ ಕೆಡೆಟ್‍ಗಳು ಶಿಸ್ತು ಮತ್ತು ರಾಷ್ಟ್ರಪ್ರೇಮದ ಪ್ರತೀಕವಾಗಿದ್ದಾರೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.2026ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿ ಐತಿಹಾಸಿಕ ಸಾಧನೆಗೈದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್‍ಸಿಸಿ ಕೆಡೆಟ್‍ಗಳನ್ನು ಅಭಿನಂದಿಸಲು ಇಂದು ಲೋಕಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್.ಸಿ.ಸಿ. ಕೆಡೆಟ್‍ಗಳ ಶಿಸ್ತು, ಸೇವಾ ಮನೋಭಾವದ ಪರಿಶ್ರಮದಿಂದಾಗಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿ ಸತತವಾಗಿ ಎರಡನೇ ಬಾರಿಗೆ ‘ಚಾಂಪಿಯನ್‍ಶಿಪ್' ಆಗಿ ಹೊರಹೊಮ್ಮಿ, ಐತಿಹಾಸಿಕ ಸಾಧನೆ ತೋರಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಮತ್ತು ಗೋವಾ ಎನ್‍ಸಿಸಿ ತಂಡವು ಸತತವಾಗಿ ಎರಡನೇ ಬಾರಿಗೆ ಗಣರಾಜ್ಯೋತ್ಸವ ಶಿಬಿರದಲ್ಲಿ ಚಾಂಪಿಯನ್‍ಶಿಪ್ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಗಳ ಬ್ಯಾನರ್ ಪಡೆದು ಐತಿಹಾಸಿಕ ಸಾಧನೆ ಮಾಡಿದೆ. ಇದು ಕೆಡೆಟ್‍ಗಳ ತಂಡದ ಭಾವನೆ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ.ಎನ್‍ಸಿಸಿಯಲ್ಲಿ ಮಹಿಳಾ ಕೆಡೆಟ್‍ಗಳ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿರುವುದು ಸಂತಸದ ವಿಷಯ. ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಪ್ರಬಲ ಹೆಜ್ಜೆಯಾಗಿದೆ. 1948ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ (ಎನ್.ಸಿ.ಸಿ) ಯುವಕರಲ್ಲಿ ಶಿಸ್ತು, ಸಾಹಸ ಮತ್ತು ದೇಶಭಕ್ತಿಯನ್ನು ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಯುವಜನತೆಯ ಚಾರಿತ್ರ್ಯ ನಿರ್ಮಾಣ ಮತ್ತು ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯ ಗುರಿಯಾಗಿದೆ.

ಸಮಾಜ ಸೇವೆ ಮತ್ತು ವಿಪತ್ತು ನಿರ್ವಹಣೆ: ನೈಸರ್ಗಿಕ ವಿಕೋಪಗಳ ಸಮಯದಲ್ಲಿ ನೆರವು, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಗಳಲ್ಲಿ ಕೆಡೆಟ್‍ಗಳು ತೋರುತ್ತಿರುವ ಸಕ್ರಿಯ ಪಾಲ್ಗೊಳ್ಳುವಿಕೆ ದೇಶದ ನಂಬಿಕೆಯನ್ನು ಗಳಿಸಿದೆ.ಎನ್.ಸಿ.ಸಿ ಕೆಡೆಟ್‍ಗಳು "ರಾಷ್ಟ್ರ ಮೊದಲು" ಎಂಬ ಮಂತ್ರದೊಂದಿಗೆ ಮುನ್ನಡೆಯಲು ಕರೆ ನೀಡಿದ ಅವರು, ಡಿಜಿಟಲ್ ಯುಗದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ, ಸುಳ್ಳು ಮಾಹಿತಿಯಿಂದ ದೂರವಿದ್ದು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Post a Comment

0Comments

Post a Comment (0)