ಬೆಂಗಳೂರು : ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ, ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಫೆಬ್ರವರಿ 9 ರಿಂದ 13 ರವರೆಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಐದು ದಿನಗಳ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಹಣಕಾಸು ಸೇವೆಗಳ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಜಿಲ್ಲಾ ಪಂಚಾಯತಿಯ ನಿರ್ದೇಶನದಂತೆ ಜಿಲ್ಲಾ ಮಾರ್ಗದರ್ಶಿ ಕೆನರಾ ಬ್ಯಾಂಕ್, ಬೆಂಗಳೂರು ನಗರ ಜಿಲ್ಲೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ಫೆಬ್ರವರಿ 9ರಂದು ಜಿಲ್ಲಾ, ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದಂತಹ ಯತೀಶ್ ಆರ್ ಅವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಸಪ್ತಾಹದ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದು ಜಿಲ್ಲೆಯಾದ್ಯಂತ ಎಲ್ಲಾ, ಬ್ಯಾಂಕ್ ಶಾಖೆಗಳಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕೆವೈಸಿ (ನೋ ಯುವರ್ ಕಸ್ಟಮರ್) ನಿಮ್ಮ ಗ್ರಾಹಕರನ್ನು ತಿಳಿಯಿರಿ ಎನ್ನುವುದು ಈ ಆರ್ಥಿಕ ಸಪ್ತಾಹದ ವಿಷಯವಾಗಿದ್ದು ಪ್ರಾಮುಖ್ಯತೆ ಹಾಗೂ ಓವಿಡಿ ಅಧಿಕೃತವಾಗಿ ಮಾನ್ಯವಾದ ದಾಖಲಾತಿಗಳ ಬಗ್ಗೆ ವಿಚಾರಗಳು, ಮರು ಕೆವೈಸಿ, ವಿಡಿಯೋ ಕೆವೈಸಿ, ಸೆಂಟ್ರಲ್ ಕೆವೈಸಿ ಆಧಾರ್ ಒಟಿಪಿ ಹೀಗೆ ಹಲವಾರು ಬ್ಯಾಂಕಿನ ವಿಷಯಗಳ ಬಗ್ಗೆ ಮಾಹಿತಿಯನ್ನು ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ ಹಣಕಾಸು ಸಾಕ್ಷರತಾ ಕೇಂದ್ರಗಳು/ಸಲಹೆಗಾರರು (ಸಿ ಎಫ್ ಎಲ್) ಗಳು, ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು ಹಾಗೂ ಬ್ಯಾಂಕಿನ ಶಾಖೆಗಳು ಶಿಬಿರವನ್ನು ಏರ್ಪಡಿಸುವ ಮೂಲಕ ಪ್ರಚಾರವನ್ನು ನೀಡಲಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಮಾರ್ಗದರ್ಶಿ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕರು ಸತೀಶ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.