ಭಾರತೀಯ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV). ಗರ್ಭಕಂಠದ ಕ್ಯಾನ್ಸರ್ ಯಾವುದೇ ರೀತಿಯ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ, ಆರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚಲು ನಿಯಮಿತ ತಪಾಸಣೆ ಮಾತ್ರವೇ ಇರುವ ಏಕೈಕ ಮಾರ್ಗ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ನಿಶಾ ಬುಚಾಡೆ. ಮಹಿಳೆಯರು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ ಆಗ್ಗಾಗ್ಗೆ ಪ್ಯಾಪ್ ಸ್ಮಿಯರ್ ಅಥವಾ ಹೆಚ್‌ಪಿವಿ ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ ಮಹಿಳೆಯರು ಲೈಂಗಿಕವಾಗಿ ಸಕ್ರಿಯರಾದ ನಂತರ ತಪಾಸಣೆ ಪ್ರಾರಂಭಿಸಬೇಕು. ಲಸಿಕೆ ಪಡೆದ ಮಹಿಳೆಯರಿಗೂ ನಿಯಮಿತ ತಪಾಸಣೆ ಅತ್ಯಗತ್ಯ, ಏಕೆಂದರೆ ಲಸಿಕೆಯು ಹೆಚ್‌ಪಿವಿ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ರೋಗವನ್ನು ತಡೆಯಲು ಸಾಧ್ಯವಿರುವುದಿಲ್ಲ. ಪ್ರತಿ ವರ್ಷ ಪ್ಯಾಪ್ ಸ್ಮಿಯರ್ ಪರೀಕ್ಷೆ, ಲಿಕ್ವಿಡ್ ಬೇಸ್ಡ್ ಸೈಟಾಲಜಿಯನ್ನು ಮೂರು ವರ್ಷಕ್ಕೊಮ್ಮೆ ಮತ್ತು HPV ಪರೀಕ್ಷೆಯನ್ನು ಐದು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳುವುದು ಒಳಿತು ಎಂದು ಡಾ. ನಿಶಾ ಸಲಹೆ ನೀಡಿದರು.
ಹೆಚ್‌ಪಿವಿ ಲಸಿಕೆಯು ಸುರಕ್ಷಿತವಾಗಿದ್ದು, ಅಧ್ಯಯನಕ್ಕೊಳಪಟ್ಟಿದೆ ಮತ್ತು ವಿಶ್ವಾದ್ಯಂತ ಹುಡುಗಿ ಹಾಗೂ ಹುಡುಗ ಇಬ್ಬರಿಗೂ ಶಿಫಾರಸು ಮಾಡಲಾಗಿದೆ. ಈ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಮಾತ್ರವಲ್ಲದೆ ಹುಡುಗರಲ್ಲಿ ಕಾಣಿಸಿಕೊಳ್ಳುವ ಗಂಟಲು, ಶಿಶ್ನ ಮತ್ತು ಗುದನಾಳದ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 15 ವರ್ಷದೊಳಗಿನ ಹುಡುಗಿಯರಿಗೆ ಆರು ತಿಂಗಳ ಅಂತರದಲ್ಲಿ ಎರಡು ಡೋಸ್, 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ 0, 2 ಮತ್ತು 6 ನೇ ತಿಂಗಳಲ್ಲಿ ಮೂರು ಡೋಸ್‌ಗಳ ಅಗತ್ಯವಿರುತ್ತದೆ. 9 ವರ್ಷ ಮೇಲ್ಪಟ್ಟವರಿಂದ ಹಿಡಿದು ಲೈಂಗಿಕವಾಗಿ ಸಕ್ರಿಯರಾಗದ ಯುವತಿಯರಲ್ಲಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಸೋಂಕಿಗೆ ಒಳಗಾಗದ ವಿವಾಹಿತ ಮಹಿಳೆಯರಿಗೂ ಇದು ರಕ್ಷಣೆ ನೀಡುತ್ತದೆ. ಲಸಿಕೆಯಿಂದ ಅನೇಕ HPV ತಳಿಗಳನ್ನು ತಡೆಯಬಹುದು, ಭಾಗಶಃ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಮದುವೆಯ ನಂತರ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.