ಡಾ. ಜಿ.ಬಿ. ಹರೀಶ ಭಾಷಣ ಅಭಾಸಾಪ ನಾಕುತಂತಿ ಷಷ್ಟಿಪೂರ್ತಿ ಸಮಾರೋಪ ಸಮಾರಂಭ

varthajala
0

ಬೆಂಗಳೂರು: ಕಾವ್ಯ ಜಗತ್ತಿನ ಮೂಲಕವೇ ಯೋಗಸಾಧನೆ ಮಾಡಿ ಸಾಕ್ಷಾತ್ಕಾರ ಪಡೆದವರು ಬೇಂದ್ರೆ‌. ಹಾಗಾಗಿ, ಹೃದಯ+ವಿವೇಕ= ಬೇಂದ್ರೆ ಕಾವ್ಯ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ ತಿಳಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ವತಿಯಿಂದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ 'ನಾಕುತಂತಿ ಷಷ್ಟಿಪೂರ್ತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಣ್ಣ ಪ್ರಬಂಧ ಬರೆಯುವವರಿಗೂ ಜೀವನದ ಪಾಠ ಕಲಿಸಿಕೊಟ್ಟವರು. ಹರಿದ್ವಾರದಲ್ಲಿ ಪುಟ್ಟ ಹುಡುಗಿಯಿಂದಲೂ ಪಾಠ ಕಲಿತರು‌. ಬೇಂದ್ರೆಯವರು ಜಗತ್ತಿನ ಮೇಷ್ಟ್ರು, ಜೀವನದ ಮೇಷ್ಟ್ರು.

ಬೇಂದ್ರೆಯವರ ಮಾತು ನಿಷ್ಠುರವಾಗಿರುತ್ತಿತ್ತು. ಆದರೆ ಮನಸ್ಸಿನಲ್ಲಿ ಕಹಿಯನ್ನು ಉಳಿಸಿಕೊಂಡವರಲ್ಲ. ಜೀವಂತಿಕೆ ಎನ್ನುವುದು ಬೇಂದ್ರೆಯವರ ಮುಖ್ಯಲಕ್ಷಣವಾಗಿತ್ತು. ಆದರೆ ಬೇಂದ್ರೆಯವರ ಕಥೆಯನ್ನು ಹೇಳುವ ಅನೇಕರು ಆಯ್ದ ಘಟನೆಗಳನ್ನು ಮಾತ್ರ ಹೇಳುತ್ತಾರೆ. ಆದರೆ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕನ್ನಡ ಸಾಹಿತ್ಯ ವಿಮರ್ಷಕರು, ಇನ್ನೂ ಸಾಕಷ್ಟು ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇದ್ದಾಗಲೇ ಪೆವಿಲಿಯನ್‌ಗೆ ಕಳಿಸಿದರು. ಸಾಹಿತ್ಯದ ರಾಜಕೀಯ ಆಟ ಆಡಿತು.
ಬೇಂದ್ರೆಯವರು ಯಾವುದೇ ಗಡಿ, ಮಿತಿ ಇಲ್ಲದ ಸಿದ್ಧಪುರುಷ. ಆರಂಭದ ದಿನದಲ್ಲಿ ನಾದದ ಆಧಾರದಲ್ಲಿ ಕವಿತೆಗಳನ್ನು‌ ಬರೆಯುತ್ತಿದ್ದರು. ನಂತರದ ದಿನಗಳಲ್ಲಿ ನಾದದಿಂದ ವೇದಗಳ ಕಡೆಗೆ ಹೊರಳಿದರು. ವೇದಕಾಲದಿಂದ ಕುಮಾರವ್ಯಾಸನವರೆಗೆ ವೇದಕಾವ್ಯಗಳವರೆಗೆ ವೇದಕಾವ್ಯಗಳಲ್ಲಿ ಇದ್ದ ಕಂದಕವನ್ನು ಬೇಂದ್ರೆ ತುಂಬಿದರು. ನಂತರದ ದಿನಗಳಲ್ಲಿ ಗಣಿತದ ಕಡೆಗೂ ಹೊರಳಿದರು. ಹೀಗಾಗಿ ಬೇಂದ್ರೆಯವರ ಜೀವನವನ್ನು ನಾದ, ವೇದ, ಸಂಖ್ಯೆ ಎಂದು ನೋಡಬಹುದು. ಕಾವ್ಯ ಜಗತ್ತಿನ ಮೂಲಕವೇ ಯೋಗಸಾಧನೆ ಮಾಡಿ ಸಾಕ್ಷಾತ್ಕಾರ ಪಡೆದವರು ಬೇಂದ್ರೆ‌.  ಒಟ್ಟಾರೆಯಾಗಿ ಹೃದಯ+ವಿವೇಕ= ಬೇಂದ್ರೆ ಕಾವ್ಯ ಎಂದರು.

ಥಟ್ ಅಂತ ಹೇಳಿ ಖ್ಯಾತಿಯ ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ ಅವರು ಬೇಂದ್ರೆ ಕುರಿತು ರಸಪ್ರಶ್ನೆಯನ್ನು ಸಭಿಕರ ನಡುವೆ ನಡೆಸಿದ್ದು ಸ್ವಾರಸ್ಯಕರವಾಗಿತ್ತು. ಈ ನಡುವೆ ಮಾತನಾಡಿದ ಅವರು, ಜೀವನದಲ್ಲಿ ಬೆಂದರೆ ಬೇಂದ್ರೆ ಆಗುತ್ತಾರೆ ಎನ್ನುವ ಮಾತಿದೆ. ಬೇಂದ್ರೆ ಅವರ ಜೀವನವನ್ನು ನೋಡಿದವರಿಗೆ ಈ ಮಾತು ಸತ್ಯವಾಗುತ್ತದೆ. ಅನೇಕ ಸಂಕಷ್ಟಗಳನ್ನು ಕಂಡು, ಅನುಭವಿಸಿದವರು ಬೇಂದ್ರೆ ಎಂದರು.
ಖ್ಯಾತ ಹಾಸ್ಯ ಸಾಹಿತಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ದ.ರಾ. ಬೇಂದ್ರೆಯವರು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಎನ್ನಪಾಡು ಎನಗಿರಲಿ, ಅದರ ಸವಿಯನ್ನಷ್ಟೇ ನೀಡುವೆ ರಸಿಕ ನಿನಗೆ ಎಂಬ ನಿಸ್ವಾರ್ಥ, ಸರಳ ವ್ಯಕ್ತಿ. ಇಂತಹ ಬೇಂದ್ರೆಯವರ ನಾಕುತಂತಿ ಕಾರ್ಯಕ್ರಮವನ್ನು ವರ್ಷಪೂರ್ತಿ ಆಯೋಜನೆ ಮಾಡಿ ಜನಮಾನಸಕ್ಕೆ ತಲುಪಿಸಿದ ಸಂತೋಷ ನಮಗಿದೆ. ಡಾ. ಜಿ.ಬಿ.‌ ಹರೀಶರು ನಮಗೆ ಗುರುವಾಗಿ ಪ್ರತಿ ಕವನವನ್ನೂ ವ್ಯಾಖ್ಯಾನಿಸಿ ಉಪಕಾರ ಮಾಡಿದ್ದಾರೆ ಎಂದರು.

ಕಲಾವಿದ ರಘುಮೂರ್ತಿ ಅವರು ಮೊದಲ ಬಾರಿಗರ ರಾಗಸಂಯೋಜಿಸಿದ, ನಾಕುತಂತಿ ಕವನಸಂಕಲನದ 'ಪ್ರಬುದ್ಧ' ಮತ್ತು 'ಚೈತನ್ಯದ ಪೂಜೆ' ಕವನಗಳನ್ನು ಗಾಯನ ಮಾಡಲಾಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಎಸ್. ನರೇಂದ್ರಕುಮಾರ್, ರಾಜ್ಯ ಸಹ ಖಜಾಂಚಿ ಭ.ರಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು.


ಯೂನಿವರ್ಸಿಟಿಗಳಲ್ಲಿ ಜ್ಞಾನವಿಲ್ಲ
ಯೂನಿವರ್ಸಿಟಿಯಲ್ಲಿರುವವರು ಬೇರೆ ಯಾರನ್ನೂ ಮೇಷ್ಟ್ರು ಎಂದು ಪರಿಗಣಿಸುವುದಿಲ್ಲ ಎಂದ ಡಾ. ಜಿ.ಬಿ. ಹರೀಶ ಅವರು, ಯೂನಿವರ್ಸಿಟಿ ಹೊರಗಿನವರಷ್ಟೇ ಅಲ್ಲದೇ ಕಾಳೆಜು, ಹೈಸ್ಕೂಲ್ ಮೇಷ್ಟ್ರನ್ನೂ ಮೇಷ್ಟ್ರು ಎಂದು ಪರಿಗಣಿಸುವುದಿಲ್ಲ. ನಿಜ ಹೇಳಬೇಕೆಂದರೆ ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ಇಲ್ಲ. ಈ ಮಾತನ್ನು, ಸವಾಲನ್ನು ಅನೇಕ ಬಾರಿ ಹೇಳಿದ್ದೇನೆ. ನಾನು ಹೇಳುವುದು ತಪ್ಪು ಎನ್ನಿಸಿದರೆ ಚರ್ಚೆಗೆ ಸಿದ್ಧ ಎಂದು ಅನೇಕ ಬಾರಿ ಹೇಕಲಿದರೂ ಇಲ್ಲಿವರೆಗೆ ಯಾರೂ ಸವಾಲನ್ನು ಸ್ವೀಕರಿಸಿಲ್ಲ ಎಂದರು.

Post a Comment

0Comments

Post a Comment (0)