ಮಹಾಶಿವರಾತ್ರಿ

varthajala
0

ಮಾಘ ಮಾಸದ ಬಹುಳ ಚತುರ್ದಶಿಯಂದು ಬರುವಂತಹ ವಿಶೇಷವಾದ ಹಬ್ಬವೇ ಮಹಾಶಿವರಾತ್ರಿ. 

ರಾತ್ರಿ ಸಮಯವು ಸಾಧಾರಣವಾಗಿ ಪೂಜೆಗೆ ಯೋಗ್ಯವಾದ ಸಮಯವಲ್ಲ. ರಾತ್ರಿ ಎಂದರೆ ಕತ್ತಲು ಇದು ತಮೋ ಗುಣ ಪ್ರತೀಕ ಎಂಬ ನಂಬಿಕೆ ಇದೆ. 

ಆದರೆ ಶಿವರಾತ್ರಿಯಂದು ರಾತ್ರಿ ಪೂಜೆಗೆ ವಿಶೇಷವಾದಂತಹ ಸ್ಥಾನವಿದೆ. ನಾಲ್ಕು ಯಾಮಗಳಲ್ಲೂ ಕೂಡ ಈಶ್ವರನಿಗೆ ಅಭಿಷೇಕ ಮತ್ತು ಬಿಲ್ವಾರ್ಚನೆಯನ್ನು ಮಾಡುವ ಸಂಪ್ರದಾಯವಿದೆ. ಭಕ್ತರು ರಾತ್ರಿ ಎಲ್ಲಾ ಎದ್ದಿದ್ದು. ಶಿವನ ಧ್ಯಾನವನ್ನು ಮಾಡುತ್ತಾ ಸಂಕೀರ್ತನೆ ಭಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ರುದ್ರ ಚಮಕ ಪಠಣ ಸಹಿತ ನಡೆಯುವ ರುದ್ರಾಭಿಷೇಕದಲ್ಲಿ ಪಾಲ್ಗೊಂಡು, ಶಿವನಿಗೆ ಬಿಲ್ವಪತ್ರೆ ಮತ್ತು ನೀರಿನ ಅಭಿಷೇಕವನ್ನು ಮಾಡಿ ಕೃತಾರ್ಥರಾಗುವಂತಹ ಸಮಯ. 

ಉಪವಾಸ ಎಂದರೆ, ಭಗವಂತನ ಹತ್ತಿರದಲ್ಲಿ ವಾಸ ಮಾಡುವುದು, ಅವನ ಗುಣ ರೂಪ ಮತ್ತು ಕ್ರಿಯೆಗಳ ಬಗ್ಗೆ ಚಿಂತನೆಯನ್ನು ನಡೆಸುತ್ತಾ, ಅವನ ಧ್ಯಾನದಲ್ಲಿ ತಲ್ಲೀನರಾಗಿ ಅವನನ್ನು ಮೆಚ್ಚಿಸುವ ಪರ್ವಕಾಲ. 

ಶಿವರಾತ್ರಿಯಂದು, ಶಿವ ಪಾರ್ವತಿಯರು ಭೂಲೋಕಕ್ಕೆ ಬಂದು ಪೂಜೆ ಮಾಡುವ ಭಕ್ತರನ್ನು ಉದ್ದರಿಸುತ್ತಾರೆ ಎಂಬ ನಂಬಿಕೆ ಇದೆ. 

ಕಥೆಗಳು 

ಶಿವ ಪುರಾಣದ ಪ್ರಕಾರ ಈ ದಿನದಂದೇ ಶಿವನು ಹಾಲಾಹಲ ವಿಷಯವನ್ನು ಸಮುದ್ರಮಥನ ಕಾಲದಲ್ಲಿ ಪಾನ ಮಾಡಿದನು. ವಿಷ ಒಳಗೆ ಇಳಿಯದ ಹಾಗೆ, ಪಾರ್ವತಿ ದೇವಿಯು ಕಾಪಾಡುತ್ತಾಳೆ ಆಗ ದೇವಾನುದೇವತೆಗಳೆಲ್ಲ ಭಜನೆ ಸಂಕೀರ್ತನೆಯನ್ನು ಮಾಡುತ್ತಾ ಶಿವನನ್ನು ರಾತ್ರಿ ಇಡಡೀ ಎಚ್ಚರವಾಗಿ ಇಟ್ಟಿರುತ್ತಾರೆ ಎಂಬ ಕಥೆ ಇದೆ.

ಲಿಂಗ ಪುರಾಣದ ಪ್ರಕಾರ ಶಿವನು ಒಂದು ಸ್ತಂಭಾಕಾರವಾಗಿ ನಿಂತು ಬ್ರಹ್ಮ ಮತ್ತು ವಿಷ್ಣುವಿಗೆ ತನ್ನ ಆದಿ ಮತ್ತು ಅಂತ್ಯವನ್ನು ಹುಡುಕಲು ಹೇಳುತ್ತಾನೆ. ಬ್ರಹ್ಮನು ಹಂಸವಾಗಿ ಮೇಲ್ಮುಖವಾಗಿ ಚಲಿಸುತ್ತಾ ಇರುವಾಗ, ಶಿವನ ಶಿರಸ್ಸಿನಿಂದ ಬಿದ್ದೆ ಎಂದು ಹೇಳಿಕೊಂಡ ಕೇದಿಗೆ ಹೂವನ್ನು ತಂದು ತಾನು ಶಿರಸ್ಸನ್ನು ನೋಡಿದೆ ಅಲ್ಲಿರುವ ಹೂವನ್ನು ತಂದಿರುವೆ ಎಂದು ಸುಳ್ಳು ಹೇಳುತ್ತಾನೆ. ವಿಷ್ಣು ವರಾಹ ರೂಪವನ್ನು ತಾಳಿ, ಪಾತಾಳದ ಕಡೆ ಹೋಗಿ ಎಷ್ಟು ಹುಡುಕಿದರು ಅಂತ್ಯ ಸಿಗುವುದಿಲ್ಲ ‌

ಸುಳ್ಳು ಹೇಳಿದ ಬ್ರಹ್ಮನಿಗೆ ಮೂರ್ತಿ ಪೂಜೆ ಇಲ್ಲ ಎಂದು ಶಾಪ ಕೊಟ್ಟು ಶಿವನು ಲಿಂಗ ರೂಪವಾಗಿ ನಿಲ್ಲುತ್ತಾನೆ. ಶಿವರಾತ್ರಿಯಂದೇ ಶಿವನು ಲಿಂಗ ರೂಪವಾಗಿ ನಿಂತ ಎಂಬ ನಂಬಿಕೆ ಇದೆ.

ಇದೇ ಶಿವರಾತ್ರಿ ಯಂದು ತನ್ನ ಜಟೆಯಲ್ಲಿ ಬಂಧಿಸಿದಂತಹ ಗಂಗೆಯನ್ನು ಭಗಿರಥನ ಪ್ರಾರ್ಥನೆಗೆ ಒಲಿದು ಭೂಮಿಯ ಮೇಲೆ ಹರಿಯಲು ಬಿಡುತ್ತಾನೆ ಎಂಬ ಕಥೆ ಇದೆ.

ಶಿವರಾತ್ರಿ ಯಂದೇ ಘೋರ ತಪಸ್ಸನ್ನು ಆಚರಿಸಿದ ಪಾರ್ವತಿ ದೇವಿಯ ತಪಸ್ಸಿಗೆ ಮೆಚ್ಚಿ ಪರಶಿವನು ಅವಳನ್ನು ವರಿಸುತ್ತಾನೆ ಎಂಬ ಕಥೆಯೂ ಇದೆ

ಕತ್ತಲು ಅಜ್ಞಾನದ ಪ್ರತೀಕವಾದರೆ, ಜಾಗರಣೆ, ಸಾಧನೆಯ ಪ್ರತಿಕ, ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗು ಎಂಬ ಪ್ರಾರ್ಥನೆ! ಬಿಲ್ವದ ಎಲೆಗಳು ಹೃದಯದ ರೂಪದಲ್ಲಿರುವುದರಿಂದ, ಅವುಗಳನ್ನು ಶಿವಲಿಂಗದ ಮೇಲೆ ಹಾಕುವುದು ಆತ್ಮ ಪರಮಾತ್ಮರ ಐಕ್ಯವನ್ನು ಸೂಚಿಸುತ್ತದೆ. 

ದೇಹದ ಚಪಲಗಳನ್ನು ಕಡಿಮೆ ಮಾಡಿಕೊಂಡು, ನಮ್ಮ ಇಂದ್ರಿಯಗಳನ್ನು ನಮ್ಮ ವಶದಲ್ಲಿ ಇಟ್ಟುಕೊಂಡಾಗ ಮಾತ್ರ ಸಾಧನೆ ಸಾಧ್ಯ. ಹಸಿವು ಮತ್ತು ನಿದ್ದೆಗಳನ್ನು ತಡೆದುಕೊಳ್ಳುವುದು ಅತ್ಯಂತ ಕಷ್ಟಕರವಾದ ನೇಮಗಳಾಗಿವೆ. ಭಕ್ತ ಪರಾಧೀನನಾದ ಪರಶಿವನು, ಈ ನೇಮಗಳನ್ನು ಆಚರಿಸಿದ ಭಕ್ತರಿಗೆ ಕೇಳಿದ ಇಷ್ಟಾರ್ಥಗಳನ್ನು ಕೊಡುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. 

ಇದು ಜ್ಞಾನಿಗಳಿಗೆ ಮಾತ್ರವಲ್ಲದೆ, ಅಜ್ಞಾನಿಗಳಾದ ಪಾಮರರಾದ ಜನರು ಕೊಡುವ ಭಕ್ತಿ ತುಂಬಿದ ಅಭಿಷೇಕಕ್ಕು ಅವನು ಒಲಿಯುತ್ತಾನೆ. 

ಬೇಡರ ಕಣ್ಣಪ್ಪನ ಕಥೆಯಲ್ಲಿ, ರಾತ್ರಿಯೆಲ್ಲ ಬಿಲ್ವ ಮರದ ಎಲೆಗಳನ್ನು ಶಿವನ ಲಿಂಗದ ಮೇಲೆ ಹಾಕಿದ, ಕಣ್ಣಪ್ಪನ ಭಕ್ತಿಗೆ ಶಿವನು ಒಲಿದ ಎಂಬ ಕಥೆ ಇದಕ್ಕೆ ಸಾಕ್ಷಿಯಾಗಿದೆ.

ಇನ್ನು ಉಪವಾಸ, ನಮ್ಮ ದೇಹದಲ್ಲಿರುವ ಕಲ್ಮಶಗಳನ್ನೆಲ್ಲ ತೊಳೆದು ಹಾಕಿ ಪಚನದ ಕ್ರಿಯೆಯನ್ನು ಸರಾಗವಾಗಿ ನಡೆಯುವಂತೆ ಮಾಡಲು ಅತ್ಯವಶ್ಯಕವಾದ ನೇಮ. ಇದರಿಂದ ದೇಹದಲ್ಲಿರುವಂತಹ ನಿಷ್ಪ್ರಯೋಜಕ ಅಣುಗಳೆಲ್ಲ ತನ್ಮಷ್ಟಕ್ಕೆ ತಾವೇ ನಾಶವಾಗಿ ಬಿಡುತ್ತವೆ.

ವೈರಾಗ್ಯಮೂರ್ತಿಯಾಗಿರುವಂತಹ ಪರಮಾತ್ಮನಾದ ಶಿವನು, ಏನನ್ನೂ ಬೇಡದೆ, ಕೇವಲ ಶುದ್ಧ ಜಲದ ಅಭಿಷೇಕ, ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಮಣಿಗಳಿಗೆ  ಒಲಿಯುತ್ತಾನೆ.

ಸ್ಮಶಾನವನ್ನೇ ಮನೆ ಮಾಡಿಕೊಂಡು, ಚಿತಾ ಭಸ್ಮವನ್ನು ಧರಿಸುವಂತಹ ಪರಶಿವನು, ಈ ದೇಹ ಅನಿತ್ಯ ಅದರ ವ್ಯಾಮೋಹವನ್ನು ಬಿಡು ಎಂದು ಮಾರ್ಗದರ್ಶನ ಮಾಡುತ್ತಿದ್ದಾನೆ.

ಜಪ ಮಾಡಲು ಉಪಯೋಗಿಸುವ ರುದ್ರಾಕ್ಷಿಮಣಿಯನ್ನು ಬಿಟ್ಟು ಬೇರೆ ಯಾವ ಆಭರಣವನ್ನು ತೊಡದೆ, ಒಡವೆ ವಸ್ತ್ರಗಳಿಗಾಗಿ ಹಾತೊರೆಯ ಬೇಡ ಎಂದು ಹೇಳುತ್ತಿದ್ದಾನೆ ‌.

ವಿಷಕಂಠನಾಗಿರುವಂತಹ ಪರಶಿವನು ಬರುವಂತಹ ಕಷ್ಟ ಕಾರ್ಪಣ್ಯಗಳನ್ನು ನುಂಗು. ಎಂದರೆ ಸಮಾಧಾನವಾಗಿ ಅನುಭವಿಸು‌. ವಿಷದ ಹಿಂದೆ ಬಂದಂತಹ ಸುಖದ ಅಮೃತದಂತೆ  ಕಷ್ಟದ ಹಿಂದೆ  ಸುಖ ಬಂದೇ ಬರುತ್ತದೆ ತಾಳ್ಮೆ ಇರಲಿ ಎಂಬ ಸಂದೇಶ ನೀಡುತ್ತಾನೆ ‌

ಗಂಗೆಯನ್ನು ಜಟೆಯಲ್ಲಿ ಬಂಧಿಸಿ, ಅಹಂಕಾರ ಪಡಬೇಡ ಎಂದು ತಿಳಿಸುತ್ತಿದ್ದಾನೆ. 

ಮೂರು ಚೂಪುಗಳಿರುವ ತ್ರಿಶೂಲವನ್ನು ಹಿಡಿದು, ಸತ್ತ್ವ ರಜಸ್ಸು ಮತ್ತು ತಮಸ್ಸೆಂಬ ಮೂರು ಗುಣಗಳನ್ನು ಗೆಲ್ಲು, ಜಾಗ್ರತ ಸ್ವಪ್ನ ಸುಷುಪ್ತಿ ಎಂಬ ಮೂರು ಅವಸ್ಥೆಯಲ್ಲೂ ಭಗವಂತನನ್ನೇ ಧ್ಯಾನ ಮಾಡುವ ಅಭ್ಯಾಸವನ್ನು ಮಾಡು. ಎಂಬ ಸದ್ಭೋದನೆಯನ್ನು ನೀಡುತ್ತಿದ್ದಾನೆ. 

ಇಂತಹ ವೈರಾಗ್ಯ ಪೂರ್ಣ ಭಗವಂತನಿಂದ, ಆಸೆಗಳನ್ನು ಕಡಿಮೆ ಮಾಡಿಕೊಳ್ಳುವ ಶಕ್ತಿಯನ್ನು ಬೇಡೋಣ. ಶಿವರಾತ್ರಿಯ ಹಬ್ಬದಂದು ಶಿವನು ಹೇಳಿರುವ ಗುಣಗಳನ್ನು ಬೆಳೆಸಿಕೊಳ್ಳುವ ಪಣವನ್ನು ತೊಡೋಣ. ಹೃದಯದಲ್ಲಿ ಸೂಕ್ತವಾಗಿರುವಂತಹ ಭಕ್ತಿಯ ಜ್ಯೋತಿಯನ್ನು ಜಾಗೃತಗೊಳಿಸಿ, ಜ್ಯೋತಿರ್ಮಯನಾದ ಭಗವಂತನಿಗೆ ಆತ್ಮ ಜ್ಯೋತಿಯಿಂದ ಆರಾಧನೆಯನ್ನು ಮಾಡೋಣ. ಆರತಿಯನ್ನು ಬೆಳಗೋಣ. ಅವನಂತೆ ಸದಾ ಲೋಕ ಕಲ್ಯಾಣಕ್ಕಾಗಿ ಕೆಲಸಗಳನ್ನು ಮಾಡೋಣ. ನಿಸ್ವಾರ್ಥ ರಾಗೋಣ, ಶಿವನಾಮ ಸ್ಮರಣೆಯನ್ನು ಮಾಡಿ ಆತ್ಮ ಶುದ್ಧಿಯನ್ನು ಮಾಡಿಕೊಳ್ಳೋಣ ಎಂದು ಪ್ರಾರ್ಥಿಸುತ್ತೇನೆ. 

ಶ್ರೀ ಕೃಷ್ಣಾರ್ಪಣಮಸ್ತು

ಡಾಕ್ಟರ್ ರೂಪಶ್ರೀ ಶಶಿಕಾಂತ್ 

ದಾವಣಗೆರೆ

Post a Comment

0Comments

Post a Comment (0)