ಸೋಲು – ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ವರನಟ ಡಾ. ರಾಜ್‍ಕುಮಾರ್ ಸಲಹೆ ನೀಡಿದ್ದರು - ನಟ ರಾಘವೇಂದ್ರ ರಾಜ್‍ಕುಮಾರ್

varthajala
0

 ಬೆಂಗಳೂರು, ಏಪ್ರಿಲ್ 24 (ಕರ್ನಾಟಕ ವಾರ್ತೆ): ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಸೋಲನ್ನು ಮನಸ್ಸಿಗೆ ಹಾಗೂ ಗೆಲುವನ್ನು ತಲೆಗೆ ಹಾಕಿಕೊಳ್ಳದೇ ಮುನ್ನಡೆಯಬೇಕು ಎಂದು ಎಂದು ನಮ್ಮ ತಂದೆ ವರನಟ ಡಾ.ರಾಜ್‍ಕುಮಾರ್ ನಮಗೆ ಕಿವಿಮಾತು ಹೇಳಿದ್ದರು ಎಂದು ಚಿತ್ರನಟ ರಾಘವೇಂದ್ರ ರಾಜಕುಮಾರ್ ತಿಳಿಸಿದರು. ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವರನಟ ಡಾ. ರಾಜ್‍ಕುಮಾರ್ ಅವರ 96ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಹನಟರು, ಮಕ್ಕಳು, ಕುಟುಂಬ ವರ್ಗದವರಿಗೆ ಡಾ.ರಾಜ್‍ಕುಮಾರ್ ಅಪರಿಮಿತ ಪ್ರೀತಿ ತೋರಿಸುತ್ತಿದ್ದರು. ಎಷ್ಟೇ ಪ್ರಖ್ಯಾತಿ ಗಳಿಸಿದ್ದರೂ ಅದನ್ನು ತೋರ್ಪಡಿಸದೇ ಸರಳವಾಗಿ ಜೀವಿಸಿದ ವ್ಯಕ್ತಿ. ಅವರು ನಮಗೆ ತೋರಿಸಿದ ಹಾದಿ, ಜೀವಿಸಿದ ರೀತಿ ಇಂದಿಗೂ ದಾರಿದೀಪವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ, ಡಾ.ರಾಜ್‍ಕುಮಾರ್ ಅವರಿಗೆ ಸರಿಸಾಟಿಯಾದ ಯಾವೊಬ್ಬ ನಟ ಇಲ್ಲ. ಅವರು ಯಾವ ಪಾತ್ರವಾದರೂ ಅದಕ್ಕೆ ಜೀವ ತುಂಬಿ ನಟಿಸುತ್ತಿದ್ದರು. ಇವರಂತೆ ವೈವಿಧ್ಯಮಯ ಪಾತ್ರ ಮಾಡಿದ ದೇಶದಲ್ಲಿ ಮತ್ತೊಬ್ಬ ನಟ ನಮಗೆ ಕಾಣಸಿಗುವುದಿಲ್ಲ. ತಾವು ನಟರಾಗಲು ಡಾ.ರಾಜ್‍ಕುಮಾರ್ ಹಾಗೂ ವರದಪ್ಪನವರ ಪಾತ್ರ ಹಿರಿದು. ಅಲ್ಲದೇ ನಮ್ಮ ರಾಜ್ಯದ ಪ್ರತಿ ಮನೆಯ ಟಿವಿಗಳಲ್ಲಿ ದಿನನಿತ್ಯ ಪ್ರಸಾರವಾಗುವ ಹಾಡುಗಳು ಚಿತ್ರಗಳ ಮೂಲಕ ರಾಜ್‍ಕುಮಾರ್ ಇನ್ನೂ ಜೀವಂತವಾಗಿದ್ದಾರೆ. ಸಾವಿರಾರು ಅಭಿಮಾನಿಗಳನ್ನು ಹೊಂದಿದ ಅವರಿಗೆ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ದೊರೆತಿದೆ ಎಂದು ತಿಳಿಸಿದರು. ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಮಾತನಾಡಿ, ವಿವಿಧ ಬಗೆಯ ಪಾತ್ರಗಳು ಅದರಲ್ಲೂ ಹೆಚ್ಚಾಗಿ ಪೌರಾಣಿಕ ಪಾತ್ರಗಳಿಗೆ ಜೀವಕಳೆ ತುಂಬುತ್ತಿದ್ದ ರಾಜ್‍ಕುಮಾರ್ ಒಬ್ಬ ಮೇರುನಟರಾಗಿದ್ದರು. 

                          
ಮಯೂರ, ಇಮ್ಮಡಿ ಪುಲಕೇಶಿ, ಬಸವಣ್ಣ, ಶ್ರೀ ರಾಘವೇಂದ್ರ, ಶ್ರೀ ಕೃಷ್ಣದೇವರಾಯ ಮುಂತಾದ ಪಾತ್ರಗಳಲ್ಲಿ ನಟಿಸಿರುವ ಅವರು ನಿಜವಾಗಿಯೂ ಅದೇ ವ್ಯಕ್ತಿಯ ಪ್ರತಿರೂಪವೇನೋ ಎಂಬಂತೆ ನಮಗೆ ಕಾಣುತ್ತಾರೆ. 20ನೇ ಶತಮಾನದ ಕನ್ನಡ ಚಿತ್ರಂಗಕ್ಕೆ ದೊರಕಿದ ಅಪರೂಪದ ರತ್ನ, ವರನಟ ಡಾ.ರಾಜ್‍ಕುಮಾರ್. ವೃತ್ತಿಯಲ್ಲಿ ತಲ್ಲೀನತೆ, ಸಮಯ ಪ್ರಜ್ಞೆ, ಶ್ರದ್ಧೆಯನ್ನು ಅವರು ಬೆಳೆಸಿಕೊಂಡಿದ್ದರು. ಡಾ.ರಾಜ್‍ಕುಮಾರ್ ಕುರಿತು ರಾಕೋಜಿರಾವ್ ಸಂಪಾದಿಸಿದ ಎರಡು ಸಾವಿರ ಪುಟಗಳ (ಚಿತ್ರ ಸಹಿತ) ಎರಡು ಪುಸ್ತಕಗಳು ಹಾಗೂ ಇನ್ನೂ ಅನೇಕ ಪುಸ್ತಕಗಳು ಸೇರಿದಂತೆ ಡಾ.ರಾಜ್‍ಕುಮಾರ್ ಕುರಿತಾಗಿ ಸುಮಾರು 10 ಸಾವಿರ ಪುಟಗಳ ಬರವಣಿಗೆ ನಮ್ಮ ಮುಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ತ್ರಿಲೋಕ ಚಂದ್ರ ಮಾತನಾಡಿ, 1929 ರಲ್ಲಿ ತಮಿಳುನಾಡಿನ ಗಾಜಿನೂರಿನಲ್ಲಿ ಜನಿಸಿದ ಡಾ.ರಾಜ್‍ಕುಮಾರ್ ಕನ್ನಡ ಚಿತ್ರಂಗದಲ್ಲಿ ಅಣ್ಣಾವ್ರು, ರಸಿಕರ ರಾಜ, ನಟಸಾರ್ವಭೌಮ ಎಂಬ ಬಿರುದು ಪಡೆದುಕೊಂಡರು. ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಮುಂತಾದ ಅತ್ಯುನ್ನತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಕನ್ನಡದ ನೆಲ ಮತ್ತು ಜಲದ ಪರ ದನಿಯೆತ್ತಿ ನಾಡಿನ ಜನರ ಬಗ್ಗೆ ಕಾಳಜಿ ವಹಿಸಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದ್ದು, ಅಪಾರ ಅಭಿಮಾನಿಗಳನ್ನು ಡಾ. ರಾಜ್‍ಕುಮಾರ್ ಗಳಿಸಿದ್ದಾರೆಂದು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಸೂರಳ್‍ಕರ್ ವಿಕಾಸ್ ಕಿಶೋರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು ಹಾಗೂ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಕಂಬದ ರಂಗಯ್ಯ ಮತ್ತು ತಂಡದವರು ಡಾ.ರಾಜ್‍ಕುಮಾರ್ ಅವರ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರು.

Post a Comment

0Comments

Post a Comment (0)