ಭಾರತದೊಂದಿಗೆ ಶಾಂತಿಯುತ ಮಾತುಕತೆಗೆ ಸಿದ್ಧ ಎಂದ ಶೆಹಬಾಜ್ ಷರೀಫ್

varthajala
0

 



ಇಸ್ಲಾಮಾಬಾದ್: ಭಾರತದ ವಿರುದ್ಧ ಯುದ್ಧೋತ್ಸಾಹದಲ್ಲಿದ್ದ ಪಾಕಿಸ್ತಾನ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ತಣ್ಣಗಾಗಿದ್ದು, ಭಾರತದೊಂದಿಗೆ ಶಾಂತಿಯುತ ಮಾತುಕತೆಗೆ ಸಿದ್ಧ ಎಂದು ಹೇಳಿದೆ.

ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಕಮ್ರಾ ವಾಯುನೆಲೆಗೆ ಗುರುವಾರ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು, ನಮ್ಮ ದೇಶ ಭಾರತದೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಹೇಳಿದ್ದಾರೆ. ಆದರೆ, ಈ ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆ ಪರಿಹರಿಸುವ ವಿಚಾರ ಕೂಡ ಇರಬೇಕೆಂದು ಷರತ್ತು ಹಾಕಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ 26 ನಾಗರಿಕರ ಬಲಿ ಪಡೆದಿದ್ದರು. ಈ ದಾಳಿಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಹಲವಾರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು.

ಇದಕ್ಕೆ ತಿರುಗೇಟು ಎಂಬಂತೆ ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ಭೀಕರ ಪ್ರತಿದಾಳಿ ನಡೆಸಿತ್ತು.

ಬಳಿಕ ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದವು. ಈಗ ಎರಡೂ ದೇಶಗಳು ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಿವೆ.

ಮೂಲಗಳ ಪ್ರಕಾರ ಯುದ್ಧವನ್ನು ಕೊನೆಗೊಳಿಸುವ ಕುರಿತು ಎರಡೂ ದೇಶಗಳ ನಡುವೆ ಮಾಡಿಕೊಂಡ ಒಪ್ಪಂದವನ್ನು ಮೇ 18 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.

Post a Comment

0Comments

Post a Comment (0)