ಅಮೆರಿಕ ಉಪಾಧ್ಯಕ್ಷಗೆ ಮೋದಿ ಸಂದೇಶ

varthajala
0

 



ನವದೆಹಲಿ : ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದಾದರೆ, ಅದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಭಾರತ-ಪಾಕ್ ಸಂಬಂಧದ ಭವಿಷ್ಯದ ದಿಕ್ಕಿನ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದಾರೆ.

ಕಾಶ್ಮೀರದ ಬಗ್ಗೆ ಭಾರತಕ್ಕೆ ಸ್ಪಷ್ಟ ದೃಷ್ಟಿಕೋನವಿದೆ. ಪಿಒಕೆ ಭಾರತದ ಅವಿಭಾಜ್ಯ ಭಾಗವಾಗಿದ್ದು, ಅದನ್ನು ಮರಳಿಸಬೇಕು. ಭಯೋತ್ಪಾದನೆಯ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ, ಇವುಗಳಿಗೆ ಹೊರತಾಗಿ ಬೇರೆ ಯಾವುದೇ ವಿಷಯದ ಬಗ್ಗೆ ಮಾತುಕತೆಗೆ ಒಡಂಬಡಿಕೆ ಇಲ್ಲ. ಕಾಶ್ಮೀರ ವಿಷಯದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಗೆ ಭಾರತ ಒಪ್ಪುವುದಿಲ್ಲ, ಅದಕ್ಕೆ ಅಗತ್ಯವೂ ಇಲ್ಲ,” ಎಂದು ಮೋದಿ ತಿಳಿಸಿದ್ದಾರೆ.

ಆಪರೇಷನ್ ಸಿಂದೂರ’ನ ಭಾಗವಾಗಿ ಇತ್ತೀಚೆಗೆ ಪಾಕಿಸ್ತಾನದ ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಗಳು ಯಶಸ್ವಿಯಾಗಿವೆ. “ಭಯೋತ್ಪಾದಕರಿಗೆ ಇನ್ನು ಯಾವುದೇ ಸುರಕ್ಷಿತ ತಾಣ ಇಲ್ಲ. ಯಾರೂ ಇನ್ನು ತಪ್ಪಿಸಿಕೊಳ್ಳಲಾರರು. ಅಗತ್ಯವಿದ್ದರೆ ಎಲ್ಲಿಯೇ ಇದ್ದರೂ ಹುಡುಕಿ ಹೊಡೆಯುತ್ತೇವೆ,” ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ದಾಳಿಗಳಿಗೂ ಮುನ್ನ ಮೋದಿ, “ಇನ್ಕೋ ಮಿಟ್ಟಿ ಮೇ ಮಿಲಾ ದೋ” (ಅವರನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ) ಎಂದು ಸೂಚಿಸಿದ್ದರು.

ಪ್ರಧಾನಿ ಮೋದಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. “ಸದಾ ಜಾಗರೂಕರಾಗಿರಿ, ಸ್ಪಷ್ಟ ಸಂವಹನವನ್ನು ಮುಂದುವರೆಸಿ,” ಎಂದು ಸೂಚಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಭಾರತದ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಸಾರಿದ್ದಾರೆ.

Post a Comment

0Comments

Post a Comment (0)