ವಿಶೇಷ ಮಕ್ಕಳ ಶಾಲೆಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

varthajala
0

  ಬೆಂಗಳೂರು: ಮಾನಸಿಕ ತೊಂದರೆ, ಶ್ರವಣ ದೋಷ, ದೃಷ್ಟಿ ವೈಕಲ್ಯ, ಸೆರೆಬ್ರಲ್ ಪಾಲ್ಸಿ ಸೇರಿದಂತೆ ವಿವಿಧ ಅಂಗವೈಕಲ್ಯ ಹೊಂದಿರುವ ವಿಶೇಷ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ನ್ಯಾಯಸಮ್ಮತ ಅನುದಾನ, ಸಮಾನ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷರಾದ ಕಾಂತಿ ಹರೀಶ್ ರವರು,ಒಕ್ಕೂಟದ ಅಧ್ಯಕ್ಷರಾದ ಸೋಮನಾಥ್ ಮಹಾಜನ್ ಶೆಟ್ಟರ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ ಒಕ್ಕೂಟದ ಕಾರ್ಯದರ್ಶಿ ಅಪ್ಪುರಾವ್ ಎಂ,ಎಸ್ ಹಾಗೂ ಒಕ್ಕೂಟದ ಮತ್ತು ಸಂಘದ ಮಾಧ್ಯಮದ ಪ್ರತಿನಿಧಿ ಸಂಜಯ್ ಸಬರದ್ ರವರು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಸಾವಿರಾರು ಶಿಕ್ಷಕರು ಭಾಗವಹಿಸಿದ್ದರು. 

 ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು 2,500ಕ್ಕೂ ಅಧಿಕ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿಶೇಷ ಚೇತನ ಮಕ್ಕಳು ಹಾಗೂ ಅವರ ಪಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿ ಸರ್ಕಾರದ ಗಮನ ಸೆಳೆಯಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, . ಸರ್ಕಾರೇತರ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳಿಗೆ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ.9,000 ಅನುದಾನ ನೀಡಲಾಗುತ್ತಿದ್ದು, ಅದನ್ನೂ ವರ್ಷಕ್ಕೆ ಕೇವಲ 10 ತಿಂಗಳು ಮಾತ್ರ ನೀಡಲಾಗುತ್ತಿದೆ.
ಜೀವನ ವೆಚ್ಚ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಅನುದಾನ ಸಂಪೂರ್ಣ ಅಪರ್ಯಾಪ್ತವಾಗಿದೆ,” ಎಂದು ಹೇಳಿದರು. ಸರ್ಕಾರದ ಅನುದಾನಿತ ವಿಶೇಷ ಶಾಲೆಗಳ ಶಿಕ್ಷಕರು ತಿಂಗಳಿಗೆ ರೂ.60,000ರಿಂದ ರೂ.80,000ರವರೆಗೆ ವೇತನ ಪಡೆಯುತ್ತಿದ್ದರೆ, ಎನ್ಜಿಒಗಳ ಮೂಲಕ ನಡೆಸಲಾಗುವ ವಿಶೇಷ ಶಾಲೆಗಳ ಶಿಕ್ಷಕರಿಗೆ ಕೇವಲ ರೂ.20,250 ಗೌರವಧನ ಮಾತ್ರ ಲಭಿಸುತ್ತಿರುವುದರಿಂದ ಸುಮಾರು ರೂ.40,000ರಷ್ಟು ವೇತನ ವ್ಯತ್ಯಾಸವಿದೆ.
ಈ ಕಾರಣದಿಂದ ಅರ್ಹ ಹಾಗೂ ಅನುಭವೀ ಶಿಕ್ಷಕರು ಎನ್ ಜಿ ಓ ನಿರ್ವಹಿತ ವಿಶೇಷ ಶಾಲೆಗಳಿಗೆ ಸೇರ್ಪಡೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಸದ್ಭಾವನಾ ಪ್ರತಿಷ್ಠಾನದ ವಿಶೇಷ ಶಾಲೆಯ ಪ್ರತಿನಿಧಿ ಸಂಜಯ್ ಸಬರಾದ್, “2016–17ರಲ್ಲಿ ನಡೆದ ಸಮೀಕ್ಷೆಯಲ್ಲಿ ಎನ್ ಜಿ ಒ ಗಳು ನಡೆಸುವ ವಿಶೇಷ ಶಾಲೆಗಳು ಸರ್ಕಾರದ ಅನುದಾನಿತ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿವೆ ಎಂಬುದು ಸ್ಪಷ್ಟವಾಗಿದೆ.
ಆದರೂ ಶಿಕ್ಷಕರಿಗೆ ಸಮಾನ ವೇತನ ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಎನ್ ಜಿ ಒ ವಿಶೇಷ ಶಾಲೆಗಳ ಶಿಕ್ಷಕರಿಗೂ ಸರ್ಕಾರದ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನೀಡುವಂತೆ ಸಮಾನ ವೇತನ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ,” ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು 250 ವಿಶೇಷ ಶಾಲೆಗಳಿದ್ದು, ಅವುಗಳಲ್ಲಿ ಕೇವಲ 180 ಶಾಲೆಗಳು ಮಾತ್ರ ಸರ್ಕಾರದ ಅನುದಾನ ಪಡೆಯುತ್ತಿವೆ.
ಉಳಿದ ಸುಮಾರು 70 ವಿಶೇಷ ಶಾಲೆಗಳು ಯಾವುದೇ ಸರ್ಕಾರಿ ನೆರವಿಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಎಚ್ಚರಿಸಿದರು. ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.


Post a Comment

0Comments

Post a Comment (0)