ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ [ಎಸ್.ಐ.ಆರ್] ಮಾಡಿ ಪ್ರಜಾಪ್ರಭುತ್ವದ ಆಧಾರ ಸ್ಥಂಭವನ್ನೇ ದುರ್ಬಲಗೊಳಿಸುವ ಪ್ರಯತ್ನದಲ್ಲಿ ಕೇಂದ್ರ ಚುನಾವಣಾ ಆಯೋಗ ತೊಡಗಿದ್ದು, ಇದೀಗ ರಾಜ್ಯದಲ್ಲೂ ಮತದಾರರ ಪರಿಷ್ಕರಣೆಗೆ ಸಜ್ಜಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದರ ಜೊತೆಗೆ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ವಿರೋಧಪಕ್ಷಗಳು ಬಳಸಿಕೊಂಡು ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸುವ ಮತ್ತೊಂದು ಅಪಾಯಕಾರಿ ಪ್ರಯತ್ನಕ್ಕೆ ಕೈ ಹಾಕಿರುವುದು ಖಂಡನೀಯ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ್ ಕುಮಾರ್ ಹೇಳಿದ್ದಾರೆ.
ಒಂದು ಕಡೆ ಚುನಾವಣಾ ಆಯೋಗ ಮತ್ತೊಂದು ಕಡೆ ವಿರೋಧ ಪಕ್ಷಗಳು ಮತದಾರರನ್ನು ದಾರಿತಪ್ಪಿಸುವ ಕೆಲಸಕ್ಕೆ ಕೈ ಹಾಕಿವೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಭಾರೀ ಷಡ್ಯಂತ್ರದಲ್ಲಿ ತೊಡಗಿವೆ. ಆಯೋಗ ಈ ವರ್ಷದ ಮೇನಲ್ಲಿ ನಡೆಸಿದ್ದ ಪುರಾತನ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು, ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ತಪ್ಪಾಗಿ ಚಿತ್ರಿಸಿ ಜನರನ್ನು ದಾರಿತಪ್ಪಿಸುವ ಯತ್ನ ನಡೆಯುತ್ತಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುವ ಷಡ್ಯಂತ್ರವಾಗಿದೆ ಎಂದು ದೂರಿಸಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದು, ಈ ವರ್ಷದ ಆಗಸ್ಟ್ ನಲ್ಲಿ. ರಾಹುಲ್ ಗಾಂಧಿ ಅವರು ಮಾಡಿರುವ ಮತಗಳತನದ ಗಂಭೀರ ಆರೋಪಗಳ ಬಗ್ಗೆ ಇದುವರೆಗೆ ಆಯೋಗ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ಮತದಾರರನ್ನು ಜಾಗೃತಿಗೊಳಿಸುವ ಸ್ವೀಪ್ ಚಟುವಟಿಕೆಯ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ವಿಪಕ್ಷಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಯೋಗ ನಡೆಸುವ ಯಾವುದೇ ಸಮೀಕ್ಷೆ, ಅಧ್ಯಯನ ಆ ಸಮಯದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವುದೇ ಹೊರತು, ವರ್ಷಗಳ ನಂತರವೂ ಅದೇ ಸ್ಥಿತಿಗತಿ ಮುಂದುವರಿದಿದೆ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ವಿರೋಧಪಕ್ಷಗಳು ಈ ಮೂಲಭೂತ ಸತ್ಯವನ್ನು ಮರೆಮಾಚಿ, ಹಳೆಯ ಸಮೀಕ್ಷೆಯ ಅಂಶಗಳನ್ನು ಇಂದಿನ ರಾಜಕೀಯ ಸಂದರ್ಭಕ್ಕೆ ಅನ್ವಯಿಸುವಂತೆ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.
ತಪ್ಪು ಮಾಹಿತಿಯಿಂದ ಜನರ ವಿಶ್ವಾಸಕ್ಕೆ ಧಕ್ಕೆ ಉಂಟಾಗಲಿದೆ. ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕುಂದಿಸುವ ದುಷ್ಪರಿಣಾಮ ಎದುರಾಗಲಿದೆ. ಆಯೋಗದ ಕಾರ್ಯವೈಖರಿಯನ್ನು ರಾಜಕೀಯ ಲಾಭಕ್ಕಾಗಿ ತಿರುಚಿ ಬಳಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾದ ಕ್ರಮ. ವಿರೋಧಪಕ್ಷಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಇಂತಹ ಹಳೆಯ ದಾಖಲೆಗಳ ಮೊರೆ ಹೋಗುತ್ತಿರುವುದು ಅವರ ರಾಜಕೀಯ ದೌರ್ಬಲ್ಯಗಳನ್ನು ತೋರಿಸುತ್ತದೆ. ವಾಸ್ತವಾಂಶಗಳ ಆಧಾರದ ಮೇಲೆ ರಾಜಕೀಯ ಚರ್ಚೆ ನಡೆಸುವ ಬದಲು, ಭ್ರಾಂತಿಪ್ರಚಾರಕ್ಕೆ ಇಳಿಯುವುದು ಜನತೆಗೆ ಮಾಡುವ ಅಪಮಾನವಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೇ ಚುನಾವಣಾ ಆಯೋಗ ರಾಜ್ಯದಲ್ಲೂ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಜ್ಜಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಜಾಪ್ರಭುತ್ವದ ಮೂಲಸ್ತಂಭವಾಗಿರುವ ಮತದಾನ ಪ್ರಕ್ರಿಯೆಯೇ ಸಂಶಯಕ್ಕೆ ಒಳಗಾಗುವಂತಹ ವಾತಾವರಣವನ್ನು ನಿರ್ಮಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ, ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಏಕಪಕ್ಷೀಯವಾಗಿ ನಡೆಯುವ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಎಂಬುದನ್ನು ಯಾವ ಸಮಯದಲ್ಲಿ, ಯಾವ ಉದ್ದೇಶಕ್ಕಾಗಿ ಮತ್ತು ಯಾವ ವಿಧಾನದಲ್ಲಿ ನಡೆಸಲಾಗುತ್ತಿದೆ ಎಂಬುದು ಅತ್ಯಂತ ಮಹತ್ವದ್ದಾಗಿದೆ. ಆದರೆ ಇತ್ತೀಚಿನ ಆಯೋಗದ ಕ್ರಮಗಳು ಜನಸಾಮಾನ್ಯರಲ್ಲಿ ವಿಶ್ವಾಸದ ಬದಲು ಆತಂಕ ಹೆಚ್ಚಿಸುತ್ತಿವೆ. ಲಕ್ಷಾಂತರ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯುವ ಭೀತಿ ಎದುರಾಗಿದ್ದು, ಇದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನೇರ ದಾಳಿಯಂತಾಗಿದೆ ಎಂದು ಟೀಕಿಸಿದ್ದಾರೆ.
ಹಿಂದಿನ ಅನುಭವಗಳನ್ನು ಗಮನಿಸಿದರೆ, ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು ಹಾಗೂ ನಗರ ಬಡವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಪಟ್ಟಿಯಿಂದ ಕೈಬಿಡಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಹಿನ್ನೆಲೆಯಲ್ಲಿಯೇ ಈಗ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆ ಒಂದು ನಿರ್ದಿಷ್ಟ ರಾಜಕೀಯ ಅಜೆಂಡಾವನ್ನು ಪೋಷಿಸುವ ಉದ್ದೇಶದಿಂದ ನಡೆಯುತ್ತಿದೆ ಎಂಬ ಅನುಮಾನಗಳು ಬಲವಾಗುತ್ತಿವೆ ಎಂದು ಡಾ. ಆನಂದ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಆಯೋಗ ಸಂಪೂರ್ಣ ನಿಷ್ಪಕ್ಷಪಾತತೆ, ಪಾರದರ್ಶಕತೆ ಮತ್ತು ಜನಪರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜದ ಆತಂಕಗಳಿಗೆ ಸಮರ್ಪಕ ಉತ್ತರ ನೀಡದೇ, ಏಕಪಕ್ಷೀಯವಾಗಿ ನಿರ್ಧಾರಗಳನ್ನು ಜಾರಿಗೊಳಿಸುವುದು ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ, ಆ ನಾಗರಿಕನಿಗೆ ಮತದಾನದ ಹಕ್ಕೇ ಕಸಿದುಕೊಂಡಂತೆ ಆಗುತ್ತದೆ. ಇದು ಕೇವಲ ತಾಂತ್ರಿಕ ದೋಷವಲ್ಲ; ಇದು ಪ್ರಜಾಪ್ರಭುತ್ವದ ಆತ್ಮದ ಮೇಲಿನ ಹಲ್ಲೆ. ಯಾವುದೇ ಪರಿಷ್ಕರಣೆ ಪ್ರಕ್ರಿಯೆ ಜನರ ಪಾಲ್ಗೊಳ್ಳುವಿಕೆ, ವ್ಯಾಪಕ ಜಾಗೃತಿ ಮತ್ತು ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ನಡೆಯಬೇಕು. ಆದರೆ ಇವುಗಳ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದಿದ್ದಾರೆ.
ಆದ್ದರಿಂದ ಆಯೋಗವು ತಕ್ಷಣವೇ ಈ ಪರಿಷ್ಕರಣೆ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಯಾವುದೇ ನಿಜವಾದ ಮತದಾರನು ಮತಹಕ್ಕಿನಿಂದ ವಂಚಿತರಾಗದಂತೆ ಭರವಸೆ ನೀಡುವುದು ಆಯೋಗದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ಬಲವಾಗಿರಲು ಮತದಾರರ ವಿಶ್ವಾಸ ಅಗತ್ಯ. ಆ ವಿಶ್ವಾಸವನ್ನೇ ಕದಡುವ ಯಾವುದೇ ಪ್ರಯತ್ನವನ್ನು ರಾಜ್ಯವು ದೃಢವಾಗಿ ವಿರೋಧಿಸಬೇಕು ಎಂದು ಡಾ. ಆನಂದ್ ಕುಮಾರ್ ಹೇಳಿದ್ದಾರೆ.