ಭಾರತೀಯ ಸಂಸ್ಕೃತಿ ತ್ಯಾಗ, ಸಂಯಮ ಮತ್ತು ಸಾಧನೆಯ ಪರಂಪರೆಯನ್ನು ಹೊತ್ತುಕೊಂಡ ಮಹಾನ್ ಸಂಸ್ಕೃತಿಯಾಗಿದೆ. ಇಲ್ಲಿ ಪ್ರತಿಯೊಂದು ಹಬ್ಬ ಮತ್ತು ಉತ್ಸವದ ಹಿಂದೆ ಆಳವಾದ ಅಧ್ಯಾತ್ಮಶಾಸ್ತ್ರ ಅಡಗಿದೆ. ದೌರ್ಭಾಗ್ಯವಶಾತ್, ಇಂದಿನ ಯುವಪೀಳಿಗೆಯ ಪಾಶ್ಚಾತ್ಯ ಅಂಧಾನುಕರಣೆಯ ಪರಿಣಾಮವಾಗಿ ‘ವ್ಯಾಲೆಂಟೈನ್ ಡೇ’ ಮುಂತಾದ ಸಂಕಲ್ಪನೆಗಳ ಜಾಲದಲ್ಲಿ ಸಿಲುಕುತ್ತಾ ಹೋಗುತ್ತಿದೆ. ಇದು ಕೇವಲ ಒಂದು ‘ದಿನ’ ಮಾತ್ರವಲ್ಲ; ಇದು ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ, ನೈತಿಕ ಮೌಲ್ಯಗಳ ಮೇಲೆ ಹಾಗೂ ಪರೋಕ್ಷವಾಗಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ವೈಚಾರಿಕ ಮತ್ತು ಸಾಂಸ್ಕೃತಿಕ ಆಕ್ರಮಣವಾಗಿದೆ.
1. ದೇಹಬುದ್ಧಿಯ ಉದಾತ್ತೀಕರಣವೇ ? ಅಥವಾ ಆತ್ಮಬುದ್ಧಿಯ ಜಾಗೃತಿಯೇ ?
ಪಾಶ್ಚಾತ್ಯರ ‘ವ್ಯಾಲೆಂಟೈನ್ ಡೇ’ ಸಂಕಲ್ಪನೆ ಸಂಪೂರ್ಣವಾಗಿ ‘ದೇಹಬುದ್ಧಿ’(Body consciousness)ಯ ಮೇಲೆ ಆಧಾರಿತವಾಗಿದೆ. ಇದರಲ್ಲಿ ಕೇವಲ ಶಾರೀರಿಕ ಆಕರ್ಷಣೆ ಮತ್ತು ಇಂದ್ರಿಯ ಸುಖಗಳಿಗೆ ಅತಿರೇಕದ ಮಹತ್ವ ನೀಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಭಾರತೀಯ ಸಂಸ್ಕೃತಿ ‘ಆತ್ಮಬುದ್ಧಿ’ (Soul consciousness) ಯನ್ನು ಬೋಧಿಸುತ್ತದೆ. ಇಂದಿನ ಪೀಳಿಗೆ ಪ್ರೇಮವೆಂದು ಭಾವಿಸುವುದು ವಾಸ್ತವದಲ್ಲಿ ಕ್ಷಣಿಕವಾದ ‘ವಾಸನೆ’(Lust) ಮಾತ್ರ. ಹಿಂದೂ ಧರ್ಮ ‘ಪ್ರೀತಿ’ಯನ್ನು (Spiritual Love) ಹೇಳುತ್ತದೆ. ಪ್ರೀತಿ ಎಂದರೆ ನಿರಪೇಕ್ಷ ಪ್ರೇಮ ! ಅದು ದೇಹವನ್ನು ನೋಡಿ ಅಲ್ಲ, ಎದುರಿನ ವ್ಯಕ್ತಿಯೊಳಗಿನ ದೈವತ್ವವನ್ನು (ಆತ್ಮತತ್ತ್ವವನ್ನು) ನೋಡಿ ಹುಟ್ಟುವ ಪ್ರೇಮ. ಅಂಥ ಪ್ರೇಮವೇ ಶಾಶ್ವತ. ವ್ಯಾಲೆಂಟೈನ್ ಡೇ ವಾಸನೆಯನ್ನು ಉತ್ತೇಜಿಸುತ್ತದೆ; ಆದರೆ ಹಿಂದೂ ಧರ್ಮ ಸಂಯಮದ ಮೂಲಕ ಬ್ರಹ್ಮಾನಂದದತ್ತ ಕರೆದೊಯ್ಯುತ್ತದೆ.
2. ಹಿಂದೂ ಧರ್ಮದ ಮೇಲಿನ ಸಾಂಸ್ಕೃತಿಕ ಮತ್ತು ನೈತಿಕ ಆಘಾತ
‘ವ್ಯಾಲೆಂಟೈನ್ ಡೇ’ ನೆಪದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾಶ್ಚಾತ್ಯ ಕಂಪನಿಗಳು ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿವೆ. ಆದರೆ ಈ ಆರ್ಥಿಕ ಲೂಟಿಗಿಂತಲೂ ಭಯಾನಕವಾದದ್ದು ನಮ್ಮ ‘ಸಾಂಸ್ಕೃತಿಕ ಲೂಟಿ’. ಈ ದಿನ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಅಶ್ಲೀಲತೆ ಹಿಂದೂಗಳ ‘ಲಜ್ಜಾರಕ್ಷಣೆ’ ಎಂಬ ಮೌಲ್ಯಕ್ಕೆ ನೇರ ಆಘಾತವಾಗಿದೆ. ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಯುವಪೀಳಿಗೆಯನ್ನು ವ್ಯಸನ ಮತ್ತು ಅನೈತಿಕತೆಯ ಕತ್ತಲೊಳಗೆ ತಳ್ಳಲಾಗುತ್ತಿದೆ. ಸಂಯಮ ಮತ್ತು ಬ್ರಹ್ಮಚರ್ಯದ ಮಹತ್ವವನ್ನು ಸಾರಿದ ಭೂಮಿಯಲ್ಲಿ ಇಂತಹ ‘ಡೇ ಸಂಸ್ಕೃತಿ’ಯನ್ನು ಹೊಗಳುವುದು ಹಿಂದೂ ಧರ್ಮದ ಮೂಲ ತತ್ವಗಳ ಮೇಲಿನ ದೊಡ್ಡ ದಾಳಿ. ಇದು ಒಂದು ರೀತಿಯ ‘ವೈಚಾರಿಕ ಗುಲಾಮಗಿರಿ’ಯಾಗಿದ್ದು, ಯುವಕರನ್ನು ತಮ್ಮ ಮೂಲಗಳಿಂದ ದೂರ ಮಾಡುವ ಕೆಲಸ ಮಾಡುತ್ತಿದೆ.
3. 365 ದಿನಗಳ ಸಂಬಂಧವೇ ? ಅಥವಾ ಒಂದೇ ದಿನದ ನಾಟಕವೇ ?
ಪಾಶ್ಚಾತ್ಯ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಕುಸಿದಿರುವುದರಿಂದಲೇ ಅಲ್ಲಿಗೆ ‘ಮದರ್ಸ್ ಡೇ’,‘ವ್ಯಾಲೆಂಟೈನ್ ಡೇ’ಮುಂತಾದ ದಿನಗಳನ್ನು ಆಚರಿಸಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಸಂಸ್ಕೃತಿ ‘ವಸುದೈವ ಕುಟುಂಬಕಮ್’ ಎಂಬ ಭಾವನೆಯನ್ನು ಸಾರುತ್ತದೆ. ನಮಗೆ ಪ್ರೀತಿಗಾಗಿ ಒಂದೇ ದಿನದ ಮುಹೂರ್ತದ ಅವಶ್ಯಕತೆಯೇ ಇಲ್ಲ. ತಾಯಿ-ತಂದೆ, ಸಹೋದರ-ಸಹೋದರಿ, ಗುರು, ರಾಷ್ಟ್ರ ಮತ್ತು ಧರ್ಮದ ಮೇಲಿನ ನಿರಪೇಕ್ಷ ಪ್ರೀತಿ ಪ್ರತಿಕ್ಷಣವೂ ನಮ್ಮ ಉಸಿರಿನೊಂದಿಗೆ ಇರಬೇಕು — ಇದು ನಮ್ಮ ಸಂಸ್ಕೃತಿಯ ಬೋಧನೆ. ಒಂದೇ ಗುಲಾಬಿ ಹೂವಿನೊಳಗೆ ಪ್ರೀತಿಯನ್ನು ಸೀಮಿತಗೊಳಿಸುವುದು ಪ್ರೀತಿಯ ಅವಮಾನವೇ ಸರಿ. ಹಿಂದೂ ಧರ್ಮದಲ್ಲಿ ಸಂಬಂಧಗಳು ‘ಕಾಂಟ್ರಾಕ್ಟ್’ಅಲ್ಲ, ಅವು ‘ಸಂಸ್ಕಾರ’.
4.‘ಯೂಸ್ ಅಂಡ್ ತ್ರೋ’ಸಂಸ್ಕೃತಿ ವಿರುದ್ಧ ಏಳು ಜನ್ಮಗಳ ಬಂಧನ
ಇಂದಿನ ‘ಡೇ ಸಂಸ್ಕೃತಿ’ಮಾನವ ಭಾವನೆಗಳ ಮಾರುಕಟ್ಟೆಯಾಗಿದೆ. ಪಾಶ್ಚಾತ್ಯ ಸಂಸ್ಕೃತಿ ‘Use and Throw’ ತತ್ವದ ಮೇಲೆ ನಿಂತಿರುವುದರಿಂದ ಅಲ್ಲಿನ ಸಂಬಂಧಗಳು ದೀರ್ಘಕಾಲ ಉಳಿಯುವುದಿಲ್ಲ ಮತ್ತು ವಿಚ್ಛೇದನ ಪ್ರಮಾಣ ಅತ್ಯಧಿಕವಾಗಿದೆ. ಇಂದಿನ ‘ವ್ಯಾಲೆಂಟೈನ್’ನಾಳೆ ಮತ್ತೊಬ್ಬನಾಗಿರುತ್ತಾನೆ. ಇದಕ್ಕೆ ವಿರುದ್ಧವಾಗಿ ಭಾರತೀಯ ಸಂಸ್ಕೃತಿ ‘ತ್ಯಾಗ ಮತ್ತು ಸಮರ್ಪಣೆ’ಯನ್ನು ಕಲಿಸುತ್ತದೆ. ಇಲ್ಲಿ ಪತಿ-ಪತ್ನಿಯ ಸಂಬಂಧ ಕೇವಲ ಶಾರೀರಿಕ ಅಗತ್ಯಗಳ ಮೇಲೆ ಅಲ್ಲ, ಅದು ‘ಏಳು ಜನ್ಮಗಳ ಬಂಧನ’ವೆಂದು ಪರಿಗಣಿಸಲಾಗಿದೆ. ಕ್ಷಣಿಕ ಸುಖಕ್ಕಾಗಿ ಜೀವನವನ್ನೇ ಹಾಳುಮಾಡುವ ಈ ವಿಕೃತ ಸಂಸ್ಕೃತಿಯ ಅಗತ್ಯ ಭಾರತೀಯರಿಗೆ ಇಲ್ಲ.
5. ಆನಂದದ ನಿಜವಾದ ವ್ಯಾಖ್ಯಾನ : ಭೋಗವೇ ? ಅಥವಾ ತ್ಯಾಗವೇ ?
ಅಧ್ಯಾತ್ಮಶಾಸ್ತ್ರ ಹೇಳುವುದೇನೆಂದರೆ, ಸುಖವು ಭೋಗದಲ್ಲಿಇಲ್ಲ, ತ್ಯಾಗದಲ್ಲಿ ಇದೆ. ಯುವಪೀಳಿಗೆಗೆ ದುಬಾರಿ ಹೋಟೆಲ್‌ಗಳಿಗೆ ಹೋಗುವುದು ಅಥವಾ ಪಬ್‌ಗಳಲ್ಲಿ ಪಾರ್ಟಿ ಮಾಡುವುದೇ ಆನಂದವೆಂದು ತೋರುತ್ತದೆ; ಆದರೆ ಆ ಆನಂದ ರಜ-ತಮ ಸ್ವಭಾವದ್ದಾಗಿದ್ದು, ಅಂತ್ಯದಲ್ಲಿ ದುಃಖವನ್ನೇ ಕೊಡುತ್ತದೆ. ಇದಕ್ಕೆ ವಿರುದ್ಧವಾಗಿ ಸಾಧನೆಯ ಮೂಲಕ ದೊರೆಯುವ ಆನಂದ ಸಾತ್ವಿಕವಾಗಿರುತ್ತದೆ. ತಾಯಿ-ತಂದೆಯ ಪಾದಗಳಿಗೆ ನಮಿಸಿ ದೊರೆಯುವ ಸಾತ್ವಿಕ ತೃಪ್ತಿ ಪಾಶ್ಚಾತ್ಯ ಉತ್ಸವಗಳಲ್ಲಿ ಎಂದಿಗೂ ಸಿಗಲಾರದು. ಆದ್ದರಿಂದ ‘ವ್ಯಾಲೆಂಟೈನ್ ಡೇ’ ಬದಲಾಗಿ ‘ಮಾತೃ-ಪಿತೃ ಪೂಜನ ದಿನ’ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ರಕ್ಷಿಸಬೇಕು.
6. ' ಕ್ರಿಯೆ’ ಮತ್ತು ‘ಸಾಧನೆ’ಯೇ ಕಾಲದ ಅಗತ್ಯ
ಕೇವಲ ವಿರೋಧ ವ್ಯಕ್ತಪಡಿಸುವುದರಿಂದ ಏನೂ ಆಗುವುದಿಲ್ಲ; ನಾವು ಕ್ರಿಯಾಶೀಲರಾಗಬೇಕು. ಸನಾತನ ಸಂಸ್ಥೆ ಸ್ವಧರ್ಮಾಭಿಮಾನವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದೆ. ಯುವಕರು ಪಾಶ್ಚಾತ್ಯ ವಿಕೃತಿಗಳಿಗೆ ಬಲಿಯಾಗದೇ ಧರ್ಮಾಚರಣೆಯಲ್ಲಿ ತೊಡಗಬೇಕು. ಸಾಧನೆ ಮಾಡಿದಾಗ ಮಾತ್ರ ನಿಜವಾದ ಮತ್ತು ಸುಳ್ಳು ಪ್ರೀತಿಯ ನಡುವಿನ ವ್ಯತ್ಯಾಸ ಅರಿಯಲು ಸಾಧ್ಯ. ನಮ್ಮೊಳಗಿನ ಪ್ರೇಮಭಾವವನ್ನು ಹೆಚ್ಚಿಸಲು ಈಶ್ವರಭಕ್ತಿ ಅಗತ್ಯ, ಏಕೆಂದರೆ ಈಶ್ವರನೇ ಪ್ರೀತಿಯ ನಿಜವಾದ ಮೂಲ.
ಭಾರತಕ್ಕೆ ಬೇಕಾಗಿರುವುದು ‘ರಾಧೆ-ಕೃಷ್ಣರ’ ಆಕರ್ಷಣೆ !
ನಮ್ಮ ವಿರೋಧ ಪ್ರೀತಿಗೆ ಅಲ್ಲ; ಪ್ರೀತಿಯ ಹೆಸರಿನಲ್ಲಿ ನಡೆಯುವ ‘ಸ್ವೈರಾಚಾರ’ ಮತ್ತು ‘ಧರ್ಮದ ಮೇಲಿನ ಆಘಾತ’ಕ್ಕೆ. ಭಾರತಕ್ಕೆ ಇಂದು ‘ರೋಮಿಯೋ-ಜುಲಿಯೆಟ್’ರ ವಿಕೃತ ಮತ್ತು ಆತ್ಮಘಾತಕ ಪ್ರೀತಿಯ ಅಗತ್ಯವಿಲ್ಲ; ಶ್ರೀಕೃಷ್ಣ ಮತ್ತು ರಾಧೆಯ ‘ಆತ್ಮಿಕ’ ಮತ್ತು ‘ದೈವಿಕ’ ಪ್ರೀತಿಯೇ ಅಗತ್ಯ. ಯುವಪೀಳಿಗೆ ಈ ಸಾಂಸ್ಕೃತಿಕ ಆಕ್ರಮಣವನ್ನು ಗುರುತಿಸಿ ತನ್ನ ಮಹಾನ್ ಹಿಂದೂ ಸಂಸ್ಕೃತಿಯನ್ನು ಅನುಸರಿಸುವುದೇ ರಾಷ್ಟ್ರರಕ್ಷಣೆಯ ಮೊದಲ ಹೆಜ್ಜೆ.